ದೀಪಾ ಭಾಸ್ತಿ
ಪ್ರಕಟಣೆಯ ದಿನಾಂಕ : 06/08/2026
ದೀಪಾ ಭಾಸ್ತಿ ಅವರು ಕೊಡಗಿನ ಖ್ಯಾತ ಸಾಹಿತ್ಯ ಅನುವಾದಕಿಯಾಗಿದ್ದು, ಅಂತರರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಅನುವಾದಕಿಯಾಗಿದ್ದಾರೆ.
ಪರಿಚಯ
ದೀಪಾ ಭಾಸ್ತಿ ಅವರು ಕನ್ನಡ ಮತ್ತು ಇಂಗ್ಲಿಷ್ ಬರಹಗಾರರು ಮತ್ತು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತರಾದ ಸಾಹಿತ್ಯ ಅನುವಾದಕರು. ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಮೊದಲ ಭಾರತೀಯ ಅನುವಾದಕರು ಮತ್ತು ಮೊದಲ ವರ್ಣೀಯ ಅನುವಾದಕರು ಎಂಬ ಹಿರಿಮೆ ದೀಪಾ ಅವರದು.ಮಡಿಕೇರಿಯಲ್ಲಿ ಜನಿಸಿದ (1983) ದೀಪಾ ಭಾಸ್ತಿ ಅಲ್ಲಿನ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಳಿಕ ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ದೀಪಾ ಅವರ ಸಾಂಸ್ಕೃತಿಕ ವಿಮರ್ಶೆಗಳು, ಪ್ರಬಂಧಗಳು, ಅಂಕಣ ಬರಹಗಳು, ಮತ್ತು ಪತ್ರಿಕಾ ಬರಹಗಳು ದೇಶ-ವಿದೇಶಗಳ ಹಲವಾರು ಪ್ರಕಟಣೆಗಳಲ್ಲಿ, ಸಂಕಲನಗಳಲ್ಲಿ, ಕಲಾ ಪುಸ್ತಕಗಳಲ್ಲಿ ಸ್ಥಾನ ಪಡೆದಿವೆ. ಅವರು ಮಕ್ಕಳಿಗಾಗಿ ರಚಿಸಿದ ‘ಅಂಜೂರ, ಅಂಜೂರ ಯಾರ ಅಂಜೂರ’ ಎಂಬ ಸಚಿತ್ರ ಪುಸ್ತಕವೂ ಪ್ರಕಟವಾಗಿದೆ. ದೀಪಾ ಭಾಸ್ತಿ ಅವರು ಕನ್ನಡದಿಂದ ಅನುವಾದಿಸಿ ಪ್ರಕಟಗೊಂಡಿರುವ ಕೃತಿಗಳಲ್ಲಿ ಕೋಟ ಶಿವರಾಮ ಕಾರಂತರ ಅದೇ ಊರು, ಅದೇ ಮರ, ಕನ್ನಡದ ಮೊದಲ ಕಥೆಗಾರ್ತಿ ಕೊಡಗಿನ ಗೌರಮ್ಮ ಅವರ ಅದೃಷ್ಟದ ಆಟ ಮತ್ತು ಇತರ ಕಥೆಗಳು, ಮತ್ತು ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್- ಆಯ್ದ ಕಥೆಗಳು) ಸೇರಿವೆ. ಹಾರ್ಟ್ ಲ್ಯಾಂಪ್ -ಆಯ್ದ ಕಥೆಗಳು ಅನುವಾದಿತ ಕೃತಿಗೆ 2024ರ ಪೆನ್ ಇಂಗ್ಲಿಷ್ ಅನುವಾದ ಪ್ರಶಸ್ತಿ ಮತ್ತು ಬಾನು ಮುಷ್ತಾಕ್ ಅವರ ಜೊತೆಗೆ ಜಂಟಿಯಾಗಿ 2025ರ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ದೊರೆತಿವೆ. ಇದೇ ಕೃತಿಗಾಗಿ ದೀಪಾ ಅವರು 2026ರ ಗ್ರೆಗ್ ಬಾರಿಯೋಸ್ ಅನುವಾದಿತ ಪುಸ್ತಕ ಬಹುಮಾನದ ರಾಷ್ಟ್ರೀಯ ವಿಮರ್ಶಕ ಪ್ರಶಸ್ತಿ ಪಟ್ಟಿಯ ಅಂತಿಮ ಸುತ್ತಿನಲ್ಲಿ ಸ್ಥಾನ ಪಡೆದಿದ್ದಾರೆ. ದೀಪಾ ಅವರು ಪತಿ, ಕಲಾವಿದ, ನಾಣಯ್ಯ ಚೆಟ್ಟೀರ ಅವರ ಜೊತೆ ಮಡೀಕೇರಿಯ ತಮ್ಮ ತೋಟದ ಮನೆಯಲ್ಲಿ ವಾಸವಿದ್ದಾರೆ.
ಮುಖ್ಯ ಸಾಧನೆಗಳು
- 2025ರ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ
- ಹಾರ್ಟ್ ಲ್ಯಾಂಪ್ -ಆಯ್ದ ಕಥೆಗಳು ಅನುವಾದಿತ ಕೃತಿಗೆ 2024ರ ಪೆನ್ ಇಂಗ್ಲಿಷ್ ಅನುವಾದ ಪ್ರಶಸ್ತಿ
ವಿಡಿಯೋ
The International Booker Prize 2025 Ceremony