ಡಾ. ರಾಣಿ ಮಾಚಯ್ಯ
ಪ್ರಕಟಣೆಯ ದಿನಾಂಕ : 11/08/2026
ಡಾ. ರಾಣಿ ಮಾಚಯ್ಯ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ
ಅಪ್ರತಿಮ ದೇಶಭಕ್ತರು, ಯೋಧರು ಜನಿಸಿದ ಕೊಡಗಿನಲ್ಲಿ ಸಂಸ್ಕೃತಿ ಪೋಷಕರಿಗೇನೂ ಕೊರತೆಯಿಲ್ಲ, ಆದರೆ ಆ ಸಂಸ್ಕೃತಿಯನ್ನು ಹೊರ ಜಗತ್ತಿಗೆ ಸಮರ್ಥವಾಗಿ ಪರಿಚಯಿಸಿದವರಲ್ಲಿ ಮೊದಲಿಗರು ಡಾ.ರಾಣಿ ಮಾಚಯ್ಯನವರೆಂದರೆ ಅತಿಶಯೋಕ್ತಿಯಲ್ಲ, “ಉಮ್ಮತ್ತಾಟ್” ಎಂಬ ಮಹಿಳೆಯರ ನೃತ್ಯ ಪ್ರಕಾರವನ್ನು ದೇಶದೆಲ್ಲಡೆ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಜನನ, ಬಾಲ್ಯ, ವಿದ್ಯಾಭ್ಯಾಸ, ವಿವಾಹ :
ಡಾ. ರಾಣಿ ಮಾಚಯ್ಯ 1943 ಏಪ್ರಿಲ್ 4 ರಂದು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪರದಲ್ಲಿ ಜನಿಸಿದರು. ಇವರ ತಂದೆ ಮೇದಪ್ಪ ತಾಯಿ ತಾಯಮ್ಮ. ಇವರು ಮಧ್ಯಮ ವರ್ಗದವರು, ಕಂಡ್ರತಂಡ ಕುಟುಂಬದ ಮೇದಪ್ಪನವರು ಸಿದ್ದಾಪುರದಲ್ಲಿ ಉದ್ಯಮಿಯಾಗಿದ್ದರು. ತಾಯಿ ತಾಯಮ್ಮ ಶಿಕ್ಷಕಿಯಾಗಿದ್ದರು. ಮಗಳು ಚಿಕ್ಕವಳಿರುವಾಗಲೇ ಮೇದಪ್ಪ ವಿರಾಜಪೇಟೆ ಸಮೀಪ ಕಾಕೋಟು ಪರಂಬುವಿನಲ್ಲಿ ತೋಟ ಖರೀದಿಸಿದ್ದರು. ಹಾಗಾಗಿ ಇವರ ವಾಸ ಸಿದ್ದಾಪುರದಿಂದ ಕಾಕೋಟು ಪರಂಬುವಿಗೆ ಸ್ಥಳಾಂತರವಾಯಿತು. ಬಾಲ ರಾಣಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಕೋಟು ಪರಂಟುವಿನಲ್ಲಿ, ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣವನ್ನು ಮಡಿಕೇರಿ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಪದವಿ ಮುಗಿದ ಬಳಿಕ ರಾಣಿಯವರು 17.05.1967 ರಲ್ಲಿ ಮಡಿಕೇರಿಯ ವಕೀಲರಾದ ಐಮುಡಿಯಂಡ ಮಾಚಯ್ಯನವರನ್ನು ವಿವಾಹವಾದರು.
ಸಾಂಸ್ಕೃತಿಕ ಚಟುವಟಿಕೆಗಳು :
ಶಾಲಾ ಕಾಲೇಜು ಅವಧಿಯಲ್ಲಿ ಓದಿನಲ್ಲಿ ಚುರುಕಾಗಿದ್ದ ರಾಣಿ ಪಠ್ಯೇತರ ಚಟುವಟಿಕೆಗಳಲ್ಲೂ ತುಂಬಾ ಆಸಕ್ತಿ ಹೊಂದಿದ್ದರು. ಶಾಲೆಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತಪ್ಪದೇ ಭಾಗವಹಿಸಿ ಶಿಕ್ಷಕರ ಮತ್ತು ಘೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರುಗಳ ಪ್ರೋತ್ಸಾಹದಿಂದ ಮುಂದೆ ಕಾಲೇಜುನಲ್ಲಿ, ಉಮ್ಮತ್ತಾಟ್, ಕೋಲಾಟ ಹಾಗೂ ಇನ್ನಿತರ ನೃತ್ಯಗಳಲ್ಲಿ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಲು ನಾಂದಿಯಾಯಿತು. ಹಾಗಾಗಿ ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಇವರದ್ದೇ ಅಗ್ರಸ್ಥಾನವೆಂದು ಇವರ ಸಹ ಪಾಠಿಗಳು ಇಂದೂ ನೆನಪಿಸಿಕೊಳ್ಳುತ್ತಾರೆ.
ಉಮ್ಮತ್ತಾಟ್ ನೃತ್ಯಕ್ಕೆ ಚಾಲನೆ ಮತ್ತು ತರಬೇತಿ :
ಡಾ.ರಾಣಿ ಮಾಚಯ್ಯನವರ ಕಲಾ ಪ್ರತಿಭೆಗೆ ಪ್ರೋತ್ಸಾಹದ ನೀರೆರೆದು ಘೋಷಿಸಿದರು.ಪತಿ ಐಮುಡಿಯಂಡ ಮಾಚಯ್ಯನವರು, `ಕಲೆ-ಸಂಸ್ಕೃತಿ ಬಗ್ಗೆ ಅಪಾರವಾದ ಕಳಕಳಿ ಇದ್ದ ಅವರು ಪತ್ನಿಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂದುವರೆಯಲು ಸಹಕರಿಸಿದರು. ಮುಂದೆ ಡಾ.ರಾಣಿ ಮಾಚಯ್ಯನವರು ಯುವತಿಯರ ತಂಡವೊಂದನ್ನು ಕಟ್ಟಿಕೊಂಡು “ಉಮ್ಮತ್ತಾಟ್” ನೃತ್ಯದ ತರಬೇತಿ ನೀಡಿದರು. ಕಾವೇರಿ ಮಾತೆಯ ಸ್ತುತಿಯೊಂದಿಗೆ ಪ್ರಾರಂಭವಾಗುವ ನಿಧಾನಗತಿಯ ಗೀತಕುಚ್ಚಕ್ಕೆ ಲವಲವಿಕೆಯ ಹೊಸರೂಪ ಕೊಟ್ಟು ಅದನ್ನು ಹೆಚ್ಚು ಜನಪ್ರಿಯಗೊಳಿಸಲು ಶ್ರಮಿಸಿದರು.
ಕೊಡಗಿನ ಜಾನಪದ ಲೋಕದಲ್ಲಿ ಮೂಡಿಸಿದ ಹೆಜ್ಜೆ :
ಸುಮಾರು ನಾಲೈದು ದಶಕಗಳ ಹಿಂದೆ ಕೊಡಗಿನಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಹೊರ ಪ್ರದೇಶಗಳಲ್ಲಿ ಅದರಲ್ಲೂ ಸಾರ್ವಜನಿಕವಾಗಿ ಹಾಗೂ ವೇದಿಕೆಗಳಲ್ಲಿ ನೃತ್ಯ ಮಾಡಿಸಲು ಹಿಂಜರಿಯುತ್ತಿದ್ದ ಕಾಲ. ಅಂತಹ ಮೂಗು ಮುರಿಯುತ್ತಿದ್ದ ಕಾಲದಲ್ಲೇ ಎಲ್ಲಾ ಮುಜಗರಗಳನ್ನು ಹೋಗಲಾಡಿಸಿ ಅದಕ್ಕೊಂದು ಗೌರವಯುತ ಸ್ಥಾನಮಾನವನ್ನು ಕಲ್ಪಿಸಿ ಕೊಟ್ಟವರು ರಾಣಿಮಾಚಯ್ಯ ಹೀಗಾಗಿ ಕೊಡಗಿನ ತಲಕಾವೇರಿಯಿಂದ ಕಾಶ್ಮೀರದವರೆಗೂ ಬೆಡಗಿನ “ಉಮ್ಮತ್ತಾಟ್” ನೃತ್ಯವನ್ನು ರಾಣಿಮಾಚಯ್ಯ ಜನಪ್ರಿಯಗೊಳಿಸಿದರಲ್ಲಿ ಮೊದಲಿಗರಾದರು. ಇನ್ನೂ ಹಲವಾರು ಕುಣಿತ ಪ್ರಕಾರಗಳಿವೆಯಾದರೂ ಕೊಡಗಿನ ಸಾಂಸ್ಕೃತಿಕ ಲೋಕದಲ್ಲಿ “ಉಮ್ಮತ್ತಾಟ್ “ಮೂಡಿಸಿದ ಹೆಜ್ಜೆ ಅಭೂತಪೂರ್ವ.
ಕಾವೇರಿ ಕಲಾ ವೃಂದ : ಅಪಾರ ಜನಪ್ರಿಯತೆಯನ್ನು ಹೊಂದಿದ್ದ ಡಾ.ರಾಣಿಮಾಚಯ್ಯ 1997ರಲ್ಲಿ ತಮ್ಮದೇ ಆದ “ಕಾವೇರಿ ಕಲಾ ವೃಂದ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಅದರ ಮೂಲಕ ಮತ್ತಷ್ಟು ಸದೃಡವಾಗಿ ತಂಡಗಳನ್ನು ಕಟ್ಟಿ ಬೆಳೆಸ ತೊಡಗಿದರು. ಕೊಡವ ಭಾಷೆಯಲ್ಲಲ್ಲದೇ ಕನ್ನಡ ನೃತ್ಯಗಳನ್ನು ನೀಡಿ ಅಪಾರ ಮನ್ನಣೆಗಳಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ :
ಡಾ.ರಾಣಿಮಾಚಯ್ಯನವರ ಮೂರ್ನಾಲ್ಕು ದಶಕಗಳ ಸಾಂಸ್ಕೃತಿಕ ಕ್ಷೇತ್ರದ ಕಲಾ ಸೇವೆಯನ್ನು ಪರಿಗಣಿಸಿದ ಸರಕಾರ 2010 ರಲ್ಲಿ ಇವರನ್ನು ಮೂರು ವರ್ಷಗಳ ಅವಧಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಮೂರು ವರ್ಷಗಳಲ್ಲಿ ತಮ್ಮ ಕಲಾ ಕ್ಷೇತ್ರದ ಅನುಭವಗಳನ್ನು ಮತ್ತು ಪರಿಣಿತಿಯನ್ನು ಅನುಷ್ಠಾನಗೊಳಿಸಿದ ತೃಪ್ತಿ ಇವರಿಗಿದೆ. ಕೊಡಗಿನ ಎಲ್ಲಾ ಜನವರ್ಗಗಳಲ್ಲಿ ಜನಪದ ಕಲೆ-ಕಲಾವಿದರಿಗೆ ಮತ್ತು ಅವುಗಳ ಉಳಿವು ಬೆಳವಣಿಗೆಗೆ ಹೆಚ್ಚು ಒತ್ತು ನೀಡಿ ಪ್ರೋತ್ಸಾಹಿಸಿದರು.
ಕೊಡಗಿನ ಮಹಿಳಾ ಸಾಂಸ್ಕೃತಿಕ ರಾಯಭಾರಿ :
ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ಕೊಡಗು ಜಿಲ್ಲೆಯ ವಿವಿಧ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಕಲೆ-ಕಲಾವಿದರು ಹೆಣ್ಣು ಮಕ್ಕಳ ಶಿಕ್ಷಣ ಮತ್ತಿತರ ಕಾರ್ಯಗಳಿಂದಾಗಿ ಡಾ.ರಾಣಿಮಾಚಯ್ಯನವರು ಜಿಲ್ಲೆಯಾದ್ಯಾಂತ ಮನೆಮಾತಾಗಿದ್ದಾರೆ. ತಮ್ಮ ಸಾಂಸ್ಕೃತಿಕ ಬದುಕಿನ ಘಟ್ಟದಲ್ಲಿ, ಡಾ.ರಾಣಿ ಮಾಚಯ್ಯನರವರು ಭಾರತದಲ್ಲಿ ಜರುಗಿದ ಅನೇಕ ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಗಳಲ್ಲಿ ತಮ್ಮ “ಉಮ್ಮತ್ತಾಟ್” ತಂಡದೊಂದಿಗೆ ಭಾಗಿಯಾಗಿದ್ದಾರೆ. ಕೊಡಗಿನ ಪ್ರಕೃತಿದತ್ತ ಸೌಂದಾರ್ಯವನ್ನು ಮೀರಿಸುವಂತ ಚೆಲುವೆಯರ ಇವರ ತಂಡದ ಪ್ರದರ್ಶನ ಆಕರ್ಷಕ ಮತ್ತು ಯಶಸ್ವಿ ಕಾರ್ಯಕ್ರಮಗಳೆಂದು ಪ್ರಶಂಸಿಸಲ್ಪಟ್ಟಿದೆ.
ಪ್ರಶಸ್ತಿ ಸನ್ಮಾನಗಳು :
ಡಾ. ರಾಣಿಮಾಚಯ್ಯನವರ ಸುಧೀರ್ಘ ಕಲಾ ಸೇವೆ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕೊಡಗು ಜಿಲ್ಲೆಯ ಕೊಡವ ಸಮಾಜ, ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತಲ್ಲದೆ ಅನೇಕ ಸಂಘ ಸಂಸ್ಥೆಗಳು ಹಾಗೂ ರಾಜ್ಯ ಮತ್ತು ರಾಷ್ಟ್ರದ ಸಂಸ್ಥೆಗಳು ಇವರ ನಾಲ್ಕು ದಶಕಗಳ ಅವಿರಹಿತ ಕಲಾ ಸೇವೆಯನ್ನು ಕೊಂಡಾಡಿ, ಗೌರವದಿಂದ ಅಭಿನಂದಿಸಿ ಸನ್ಮಾನಿಸಿವೆ. ಪ್ರಶಸ್ತಿ, ರಾಜ್ಯ ಜನಪದ ಮತ್ತು ಯಕ್ಷಗಾನ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಏಳ್‍ನಾಡು ಕೊಡವ ಸಂಘದ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಶಸ್ತಿ, ಕೊಡವ ಸಮಾಜದಿಂದ ಪ್ರಶಸ್ತಿ, ಕರ್ನಾಟಕ ಉರ್ದು ಪ್ರಶಸ್ತಿ ಹಾಗೂ 1994ರಲ್ಲಿ ಪಂಜಾಬ್‍ನಲ್ಲಿ ಜರುಗಿದ ನೆಹರೂ ಯುವಕ ಕೇಂದ್ರ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರ ಉಮ್ಮತ್ತಾಟ್ ತಂಡಕ್ಕೆ ಶಿಸ್ತು ಮತ್ತು ಸ್ವಚ್ಛತೆಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದು ಇವರ ಶಿಸ್ತು ಬದ್ದ ತಂಡದ ನಡತೆಗೆ ನೀಡಿದ ಪ್ರಶಂಸೆಯಲ್ಲದೆ ಇನ್ನೇನು?
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು :
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿ ಅವರಿಗೆ ಭವಿಷ್ಯದ ಹಾದಿ ತೋರಿಸುವ ಕಾಯಕದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಹತ್ತಾರು ಆಸಕ್ತ ಯುವತಿಯರಿಗೆ ನೆರವು ನೀಡಿ ನೆರಳಾಗಿದ್ದಾರೆ. ಗಣರಾಜ್ಯೋತ್ಸವ ಪೆರಡ್, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ಆಯೋಜಿಸಿದ ಹಂಪಿ ಉತ್ಸವ, ಕದಂಬ ಉತ್ಸವ, ಬಾದಾಮಿ ಉತ್ಸವ, ನೆಹರೂ ಯುವಕ ಕೇಂದ್ರದ ಉತ್ಸವಗಳು, 2009ರಲ್ಲಿ ಕಲ್ಕತದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ, 1994 ದೆಹಲಿಯಲ್ಲಿ ಜರುಗಿದ “ಪೂಲ್‍ವಾಲನ್ ಶೋರ್‍ಹೈ” ಕಾರ್ಯಕ್ರಮ, ಮೈಸೂರು ದಸರಾ ಉತ್ಸವಗಳು, ಚಿತ್ರದುರ್ಗ ಉತ್ಸವ. ಜನಪದ ಜಾತ್ರೆ, ಗೋವಾ ಉತ್ಸವ, ಕರಾವಳಿ ಉತ್ಸವ, ನಾಗಾಪರ ಉತ್ಸವ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಜರುಗಿದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಮಿಜೋರಾಂ, ಮುಂಬೈ ಕರ್ನಾಟಕ ಸಂಘ, ಮಧ್ಯ ಪ್ರದೇಶ, ಕೇರಳ, ದೆಹಲಿ ಕರ್ನಾಟಕ ಸಂಘ, ಪಾಂಡಿಚೇರಿ ಅಂಡಮಾನ್ ಮುಂತಾದ ರಾಜ್ಯಗಳಲ್ಲಿ, ನಗರಗಳಲ್ಲಿ “ಉಮ್ಮತ್ತಾಟ್”, “ಕೋಲಾಟ” ಹಾಗೂ ಕನ್ನಡದ ಕಂಪನ್ನು ಬೀರುವ “ಹಚ್ಚೆವು ಕನ್ನಡದ ದೀಪ” ಗೀತ ನೃತ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.ಇವರು ಸಾಂಸ್ಕೃತಿಕ ವಿನಿಯಮ ಕಾರ್ಯಕ್ರಮಗಳನ್ನು ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್, ಹಿಮಾಚಲ ಪ್ರದೇಶ, ಮುಂಬೈ, ಹರಿಯಾಣ, ವಿಜೋರಾಂ, ಪಂಜಾಬ್, ಮದ್ಯಪ್ರದೇಶ, ಓರಿಸ್ಸಾ, ತಂಜಾವೂರ್ ಅಕಾಡೆಮಿ, ಮಹಾರಾಷ್ಟ್ರ, ಡೆಲ್ಲಿಯಲ್ಲಿ ಕರ್ನಾಟಕ ಉತ್ಸವ ಅಂತರರಾಷ್ಟ್ರೀಯ ಚಲನ ಚಿತ್ರತ್ತೋತ್ಸವ. ಬೆಂಗಳೂರು ನಾಗಪುರದಲ್ಲಿ ಕರಾವಳಿ ಉತ್ಸವ, ಭಗತ್ ಸಿಂಗ್ 150 ವರ್ಷದ 80 ಕಿಮೀ ಜಾತಾದಲ್ಲಿ ನೀಡಿರುತ್ತಾರೆ
ಪ್ರಶಸ್ತಿ ಸನ್ಮಾನಗಳು:
- 2005 ರಲ್ಲಿ ಕರ್ನಾಟಕ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
- 2023 ರಲ್ಲಿ ರಾಷ್ಟ್ರಪತಿ ಅವರಿಂದ ಪದ್ಮಶ್ರೀ ಪ್ರಶಸ್ತಿ
- 2023 ರಲ್ಲಿ ಮಹಾತ್ಮ ಜ್ಯೋತಿ ರಾವ್ ಫುಲೆ ವಿಶ್ವವಿದ್ಯಾಲಯ, ಜೈಪುರ,ರಾಜಸ್ಥಾನ ಇವರಿಂದ ಡಾಕ್ಟರೇಟ್
- 2023 ರಲ್ಲಿ ಕರ್ನಾಟಕ ಅಮೃತ ಮಹೋತ್ಸವದ ಸವಿ ನೆನಪಿನ ಕಾಣಿಕೆ
- 2024 ರಲ್ಲಿ ಚೈತನ್ಯ ಶ್ರೀ ಪ್ರಶಸ್ತಿ
- 2025 ರಲ್ಲಿ ಗ್ಲೋಬಲ್ ಪ್ರೈಡ್ ಫಂಡೇಷನ್ ಇವರಿಂದ ಪದ್ಮ ಮಹಾನ್ ಪ್ರಶಸ್ತಿ
- ಬೆಳವಾಗಿ ಜಾನಪದ ಪ್ರಶಸ್ತಿ ಪಡೆದ ಜಿಲ್ಲೆ ಹಾಗೂ ರಾಜ್ಯಕ್ಕೆ ಗೌರವವನ್ನು ತಂದಿರುತ್ತಾರೆ.
Video
The International Booker Prize 2025 Ceremony
